ಬಾಡಿಗೆ ಕೊಳ್ಳಿಕೆ - 
ಯಾವುದೇ ಸರಕನ್ನು ಒಂದು ಗೊತ್ತಾದ ಅವಧಿಗೆ ಬಾಡಿಗೆಯ ಮೇಲೆ, ಆದರೆ ಆ ಅವಧಿಯ ಅಂತ್ಯದಲ್ಲಿ ಆ ಸರಕನ್ನು ಬಾಡಿಗೆದಾರ ಕೊಳ್ಳಬಹುದೆಂಬ ಷರತ್ತಿನೊಂದಿಗೆ, ಪಡೆಯಲು ಮಾಡಿಕೊಂಡ ಒಪ್ಪಂದದ ಪ್ರಕಾರ ನಡೆಸಿದ ವಹಿವಾಟು (ಹೈರ್ ಪರ್ಚೇಸ್). ಸರಕಿನ ಮೆಲೆ ಹಲವು ಕಂತುಗಳ ರೂಪದಲ್ಲಿ ಅದರ ಒಡೆಯನಿಗೆ ಬಾಡಿಗೆದಾರ ನಿಶ್ಚಿತವಾದ ಹಣ ಪಾವತಿ ಮಾಡುತ್ತಾನೆ. ಒಪ್ಪಂದದ ಅವಧಿಯಲ್ಲಿ ಕೊನೆಯ ಕಂತನ್ನು ಪಾವತಿ ಮಾಡುವ ತನಕವೂ ಬಾಡಿಗೆದಾರನಿಗೆ ಆ ಸರಕಿನ ಒಡೆತನದ ವರ್ಗಾವಣೆ ಆಗುವುದಿಲ್ಲ. ಸರಕಿನ ಬಿಕರಿದಾರನಿಗೂ ಖರೀದಿದಾರರಿಗೂ ಕೆಲವು ಹಕ್ಕುಗಳೂ ಹೊಣೆಗಳೂ ಇರುತ್ತವೆ. ಬಾಡಿಗೆದಾರ ಯಾವಾಗಬೇಕಾದರೂ ಬಿಕರಿದಾರನಿಗೆ ತಿಳುವಳಿಕೆ (ಸೂಚನೆ)ನೀಡುವ ಮೂಲಕ, ಈ ಒಪ್ಪಂದವನ್ನು ಕೊನೆಗೊಳಿಸಬಹುದು. ಆದರೆ ಸರಕನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳುವ ಬಿಕರಿದಾರನಿಗೆ ಅವನು ಅವಕಾಶ ನೀಡಬೇಕು. ಅಲ್ಲದೆ ಅಲ್ಲಿಯ ತನಕ ಬಾಕಿಯಿದ್ದ ಎಲ್ಲ ಕಂತುಗಳನ್ನೂ ಪಾವತಿ ಮಾಡಬೇಕು. ಒಪ್ಪಂದದಲ್ಲಿ ವಿಧಿಸಿರಬಹುದಾದ ಷರತ್ತಿನ ಪ್ರಕಾರ ಪಾವತಿ ಮಾಡಬೇಕಾಗುವ ಮೊಬಲಗನ್ನು ಸಲ್ಲಿಸಬೇಕು. ಬಾಡಿಗೆದಾರನ ಉಪೇಕ್ಷೆಯಿಂದಾಗಿ ಸರಕಿಗೆ ನಷ್ಟವೇನಾದರೂ ಆಗಿದ್ದರೆ ಅದನ್ನು ತುಂಬಿಕೊಡುವ ಹೊಣೆ ಬಾಡಿಗೆದಾರನದು.

ಸರಕಿನ ಮೇಲೆ ಪಾವತಿ ಮಾಡಬೇಕಾದ ಕಂತನ್ನು ಬಾಡಿಗೆದಾರ ಪಾವತಿ ಮಾಡದಿದ್ದರೆ ಆ ಸರಕನ್ನು ವಾಪಸು ತೆಗೆದುಕೊಳ್ಳಲು ಬಿಕರಿದಾರನಿಗೆ ತಿಳಿವಳಿಕೆ ನೀಡಿ, ಅದರಲ್ಲಿ ಸೂಚಿತವಾದ ಅವಧಿಯೊಳಗೆ ಬಾಡಿಗೆದಾರ ಬಾಕಿಯಿರುವ ಮೊಬಲಗನ್ನು ಪಾವತಿ ಮಾಡದಿದ್ದರೆ ಈ ಹಕ್ಕು ಚಲಾಯಿಸಬಹುದು.

ಬಾಡಿಗೆ ಕೊಳ್ಳಿಕೆ ವಹಿವಾಟನ್ನು ಕುರಿತಂತೆ ಒಂದು ಲಿಖಿತ ಒಪ್ಪಂದ ಇರುತ್ತದೆ. ಸರಕಿನ ನಗದು ಬೆಲೆ, ಬಾಡಿಗೆಕೊಳ್ಳಿಕೆ ಬೆಲೆ, ಪಾವತಿ ಮಾಡಬೇಕಾದ ಕಂತುಗಳ ಮೊಬಲಗು ಮತ್ತು ಅವುಗಳ ಪಾವತಿಯ ದಿನಾಂಕ, ಸರಕಿನ ವಿವರ ಮುಂತಾದ ಅಂಶಗಳು ಒಪ್ಪಂದದಲ್ಲಿ ನಮೂದಾಗಿರುತ್ತವೆ. ಇದಕ್ಕೆ ಉಭಯ ಪಕ್ಷಗಳವರ ಸಹಿ ಗಳಿರುತ್ತವೆ. 		
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ